ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಕಾಂಬೋದ ಸಿನಿಮಾದಲ್ಲಿ ರಾಘಣ್ಣ `ಒಂದು ಸರಳ ಪ್ರೇಮಕಥೆ`ಗೆ ಕುಂಬಳಕಾಯಿ
Posted date: 05 Sun, Nov 2023 03:27:20 PM
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ಸಿಂಪಲ್ ಸುನಿ ಹಾಗೂ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಒಂದು ಸರಳ ಪ್ರೇಮ ಕಥೆ. ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮೈಸೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ವಿಶೇಷ ಅಂದರೆ ವಿನಯ್ ಸಿನಿಮಾದಲ್ಲಿ ಅಪ್ಪ ರಾಘಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿ ಮಾಧ್ಯಮದವರೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 

ನಿರ್ದೇಶಕ ಸುನಿ ಮಾತನಾಡಿ, ಟೈಟಲ್ ಹೇಳುವಂತೆ ಇದೊಂದು ಸರಳ ಪ್ರೇಮಕಥೆ. ಸಂಗೀತ ನಿರ್ದೇಶಕನ ಪ್ರೇಮಕಥೆಯಾಗಿರುವುದರಿಂದ ಸಂಗೀತಮಯ ಜರ್ನಿ..ಅಂದರೆ ನಮ್ಮ ಆಲ್ಬಂ ತೆಗೆದುಕೊಂಡು ಹಾಕಿಕೊಂಡರೆ ಮೈಸೂರಿನಿಂದ ಬೆಂಗಳೂರು ತಲುಪುತ್ತೀರಾ..ಒಟ್ಟು ಸಿನಿಮಾದಲ್ಲಿ 11 ಸಾಂಗ್ ಗಳು ಇವೆ. ಎಲ್ಲಾ ಪ್ರಕಾರದ ಸಂಗೀತಗಳು ಹಾಡಿನಲ್ಲಿದೆ. ಖುಷಿ ವಿಷಯ ಏನಂದರೆ ಮೊದಲ ದಿನ ವಿನಯ್ ಸರ್ ಚಿತ್ರೀಕರಣ ಮಾಡಿದೆ. ಕೊನೆಯ ದಿನ ರಾಘಣ್ಣ ಅವರು ಚಿತ್ರೀಕರಣ ಮಾಡಿದ್ದೇನೆ. ದೊಡ್ಮನೆ ಕುಟುಂಬದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಒಟ್ಟು 83 ದಿನ ಶೂಟ್ ನಡೆಸಿದ್ದೇವೆ. ಮುಂಬೈ, ರಾಜಸ್ತಾನ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು. 

ರಾಘಣ್ಣ ಮಾತನಾಡಿ, ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾ ನೋಡಿದ್ಮೇಲಿನಿಂದ ಸುನಿ ಅವರ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿತ್ತು. ನನ್ನ ಮಗ ನಟಿಸುತ್ತಿದ್ದೇನೆ ಎಂದಾಗ ದೊಡ್ಡ ವಿಷಯ ಎನಿಸಿತು. ನನಗೆ ಟೈಟಲ್ ತುಂಬಾ ಇಷ್ಟವಾಯಿತು. ಸಂಗೀತ ಅಂದರೆ ಏಳು ಸ್ವರಗಳು ಇರುತ್ತವೆ. ನನ್ನ ಒಂದು ಸ್ವರವಾಗಿ ಸೇರಿಸಿಕೊಂಡಿದ್ದಾರೆ. ಅದು ನನಗೆ ಸಂತೋಷ ಕೊಡುತ್ತದೆ. ಕುಂಬಳಕಾಯಿ ಹೊಡೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಚೆನ್ನಾಗಿ ಆಗಲಿ. ಸಿನಿಮಾ ನಿಮ್ಮ ಮುಂದೆ ಬರಲಿ. ನಿಮ್ಮ ಬೆಂಬಲ ಇರಲಿದೆ ಎಂದರು. 

ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಒಂದು ಸರಳ ಪ್ರೇಮಕಥೆ..ಈ ಸಿನಿಮಾದಲ್ಲಿ ನಟಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಶೂಟಿಂಗ್ ಗೆ ಯಾವುದೇ ತೊಂದರೆ ಆಗದಂತೆ ನಿರ್ಮಾಪಕರಾದ ರಮೇಶ್ ಅವರು ಮಾಡಿಕೊಟ್ಟರು. ಸುನಿ ಅವರ ಜೊತೆ ಕೆಲಸ ಮಾಡಲು ಖುಷಿ ಕೊಡ್ತು. ಸುನಿ ಅವರಂತೂ ಒಬ್ಬ ಕಲಾವಿದನಿಗೆ ನಟಿಸಲು ತುಂಬ ಕಂಪರ್ಟ್ ಫೀಲ್ ಕೊಡ್ತಾರೆ. ಆಕ್ಟಿಂಗ್ ಮಾಡಲು ಟ್ರೈ ಮಾಡುವುದು ಬೇಡ. ಅದು ತಾನಾಗಿಯೇ ಬರುತ್ತದೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಕಲಾವಿದರ ಅದ್ಭುತವಾಗಿ ನಟಿಸಿದ್ದಾರೆ ಎಂದರು. 

ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿ, ನನ್ನ ಸಿನಿಮಾ ಕರಿಯರ್ ನ ಅತ್ಯಂತ ಉತ್ಕೃಷ್ಟ ಮ್ಯೂಸಿಕ್ ಸಂಗೀತ ಸಿನಿಮಾ ಒಂದು ಸರಳ ಪ್ರೇಮ ಕಥೆ. ನನ್ನ ಎರಡನೇ ಸಿನಿಮಾದಲ್ಲಿ 10 ಹಾಡುಗಳಿದ್ದವು. ತುಂಬ ದೊಡ್ಡ ಹೆಸರು ತಂದುಕೊಟ್ಟಿತ್ತು. ಆ ನಂತರ ಯೋಗರಾಜ್ ಭಟ್ ಅವರ ಪ್ರೊಡಕ್ಷನ್ ನಲ್ಲಿ ದೇವ್ರೇ ಅಂತಾ ಮಾಡಿದ್ದೆ. ಅದು ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಈ ಸಿನಿಮಾ ಆ ಎರಡು ಸಿನಿಮಾಗಳನ್ನು ಈ ಚಿತ್ರ ಮೀರಿಸುತ್ತದೆ ಅನಿಸುತ್ತಿದೆ. ಯಾಕಂದರೆ ಈ ಸಿನಿಮಾದಲ್ಲಿ 11 ಹಾಡುಗಳಿವೆ. ಸಿನಿಮಾದ ನಡುವೆ ಚಿಕ್ಕ ಚಿಕ್ಕ ಬೀಟ್ ಬರುತ್ತದೆ. 2 ಗಂಟೆ 20 ನಿಮಿಷ ಸಿನಿಮಾದಲ್ಲಿ ಮ್ಯೂಸಿಕ್ ಜೊತೆ ಕನೆಕ್ಟ್ ಆಗುತ್ತದೆ ಎಂದರು.

ನಿರ್ಮಾಪಕರಾದ ಮೈಸೂರು ರಮೇಶ್ ಮಾತನಾಡಿ, ನಾನು ಪುಣ್ಯವಂತ. ಕನ್ನಡ ಚಿತ್ರರಂಗದಲ್ಲಿ ಯಾರೇ ಏನೇ ಮಾಡಬೇಕು ಎಂದರೆ ದೊಡ್ಮನೆ ಆಶೀರ್ವಾದ ಬೇಕು. ನನ್ನ ಸಿನಿಮಾದಲ್ಲಿ ರಾಘಣ್ಣ ಹಾಗೂ ವಿನಯ್ ಅವರು ನಟಿಸಿರುವುದು ಖುಷಿ ಕೊಟ್ಟಿದೆ. ಈ ಸಿನಿಮಾವನ್ನು ತುಂಬಾ ಪ್ರೀತಿಯಿಂದ ಮಾಡಿದ್ದೇನೆ ಎಂದರು. 

ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ವಿನಯ್ ರಾಜ್ಕುಮಾರ್ ಗೆ ಜೋಡಿಯಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed